ಚಂದ್ರಾಪೀಡ - 
ಬಾಣಭಟ್ಟನ ಕಾದಂಬರಿ ಎಂಬ ಸಂಸ್ಕøತ ಗದ್ಯಕಾವ್ಯದ ನಾಯಿಕೆಯಾದ ಕಾದಂಬರಿಯ ಪತಿ. ಚಂದ್ರಾಪೀಡ ಕಾದಂಬರಿಯರ ಮತ್ತು ಮಹಾಶ್ವೇತೆ ಪುಂಡರೀಕರ ಪ್ರಣಯವೃತ್ತಾಂತ ವರ್ಣನೆಯೇ ಬಾಣನ ಕೃತಿಯ ವಸ್ತು. ಈ ಕೃತಿಗೆ ಆಧಾರವಾದ ಕಥಾರಿತ್ಸಾಗರದಲ್ಲಿ ಚಂದ್ರಾಪೀಡನನ್ನು ಸೋಮಪ್ರಭವೆನ್ನಲಾಗಿದೆ.
ಪುಂಡರೀಕನಿಂದ ಶಾಪನಡೆದ ಚಂದ್ರನೇ ಚಂದ್ರಾಪೀಡನಾಗಿ ಜನಿಸಿ ಗಂಧರ್ವ ಕನ್ಯೆಯಾದ ಕಾದಂಬರಿಯೊಂದಿಗೆ ಅನುರಾಗ ಹೊಂದಿ ಅವಳನ್ನು ವರಿಸುವ ಮುಂಚೆಯೇ ದೇಹ ತ್ಯಜಿಸುತ್ತಾನೆ. ಅನಂತರ ಶೂದ್ರಕ ರಾಜನಾಗಿ ಹುಟ್ಟಿ ಶಾಪ ವಿಮೋಚನೆಯಾದ ಮೇಲೆ ಮತ್ತೆ ಚಂದ್ರಾಪೀಡನಾಗಿ ಕಾದಂಬರಿಯನ್ನು ವಿವಾಹವಾಗುತ್ತಾನೆ.

ಒಟ್ಟು ಕಥೆಯ ನಡಿಗೆ ಬೇರೆ ಬೇರೆ ಪಾತ್ರಗಳ ಅಭಿವ್ಯಕ್ತಿಯ ಮೂಲಕವಾದರೂ ಮುಖ್ಯಕಥೆಯ ದೃಷ್ಟಿಯಿಂದ ಒಂದು ರೀತಿಯಲ್ಲಿ ಚಂದ್ರಾಪೀಡನೇ ಅದಕ್ಕೆ ಪ್ರೇರಕ ಮತ್ತು ಕೇಂದ್ರ. ಮಹಾಶ್ವೇತೆಗೆ ಅಭಯವಿತ್ತು ಅವಳ ಕಥೆಯನ್ನು ನಮಗೆ ಕೇಳಿಸಿ, ಕಾದಂಬರಿಯನ್ನು ಪ್ರೀತಿಸಿ ಮುಂದಿನ ಘಟನೆಗೆ ಕಾರಣನಾಗಿ, ಶೂದ್ರಕನಾಗಿ ಮತ್ತೆ ಗಿಣಿಯಿಂದ ಕಥೆಯನ್ನು ಕೇಳಿಸಿ-ಹೀಗೆ ಪ್ರತ್ಯಕ್ಷ, ಪರೋಕ್ಷವಾಗಿ ಚಂದ್ರಾಪೀಡ ಇಲ್ಲಿ ಮುಖ್ಯಬಿಂದುವಾಗುತ್ತಾನೆ.

ಚಂದ್ರನಂತೆಯೇ ಚಂದ್ರಾಪೀಡ ಸೌಮ್ಯಪ್ರವೃತ್ತಿಯವ. ವಿದ್ಯೆ, ವಿನಯ, ಗಾಂಭೀರ್ಯ-ಎಲ್ಲ ಇವನಲ್ಲಿ ನೆಲಸಿವೆ. ಈತ ಎಷ್ಟು ಉತ್ತಮವಾದ ಗೆಳೆಯ, ಪಾಲಕ, ಮಗ ಎಂಬುದನ್ನು ಕಾವ್ಯದ ಉದ್ದಕ್ಕೂ ನೋಡುತ್ತೇವೆ. ಇವನಿಗೆ ಮಹಾಶ್ವೇತೆಯಲ್ಲಿ ಭಕ್ತಿ, ಗೌರವ, ಆಕೆಗೂ ಇವನಲ್ಲಿ ಸೋದರ ವಾತ್ಸಲ್ಯ. ಮಹಾಶ್ವೇತೆಯ ಮಾರ್ಗದರ್ಶನದಲ್ಲಿ ನಂಬಿಕೆಯಿಟ್ಟು ಈತ ನಡೆಯುತ್ತಾನೆ. ಕಾದಂಬರಿಯನ್ನು ಪ್ರೀತಿಸಿದರೂ ಅದು ತೂಕತಪ್ಪಿದ ಲಘುಪ್ರಣಯವಲ್ಲ. ಸಂಯಮ ವಿವೇಚನೆ ಇವನ ನಡತೆಯ ಹಿಂದಿದೆ. ಇವನ ಪ್ರೀತಿ ಕಾದಂಬರಿಯಲ್ಲಿ ಕೇಂದ್ರೀಕೃತವಾದದ್ದು. ಕಾದಂಬರಿ ಮಹಾಶ್ವೇತೆಯರೊಂದಗಿನ ನಡೆವಳಿಕೆ, ಕಾದಂಬರಿಯ ವಿಷಯವನ್ನು ತಂದೆತಾಯಿಗೆ ಹೇಳುವಲ್ಲಿನ ಸಂಕೋಚ, ಗೆಳೆಯನನ್ನು ಕಾಣುವ ಆತುರದಲ್ಲಿಯೂ ಯೋಚಿಸುವ ರೀತಿ-ಈ ಎಲ್ಲವೂ ಇವನ ಸುಂಸ್ಕøತ, ನಾಗರಿಕ ಮನೋಭಾವಕ್ಕೆ ಸಾಕ್ಷಿಗಳು. ಶೂದ್ರಕ, ಚಂದ್ರಾಪೀಡ ಈ ಎರಡೂ ಜನ್ಮಗಳಲ್ಲಿ ಮೇಲಿನ ಗುಣಗಳು ಎದ್ದುಕಾಣುತ್ತವೆ. ಮಹಾಶ್ವೇತೆ ಇವನನ್ನು ಕಂಡು ಆದರಿಸಿ ತನ್ನ ಆತ್ಮವೃತ್ತಾಂತವನ್ನು ಹೇಳಿಕೊಂಡಿರುವುದೇ ಇವನ ಯೋಗ್ಯತೆಗೆ ವಿವೇಕಕ್ಕೆ ದಿಕ್ಸೂಚಿಯಾಗಿವೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾದಂಬರಿಯ ಉದ್ದಕ್ಕೂ ಚಂದ್ರಾಪೀಡ ಸುಳಿಯುತ್ತಾನೆ. ನಾಗವರ್ಮ ಕರ್ಣಾಟಕ ಕಾದಂಬರಿ ಎಂಬ ಹೆಸರಿನಿಂದ ಮೂಲ ಸಂಸ್ಕøತ ಗದ್ಯಕೃತಿಯನ್ನು ಸುಂದರ ಕನ್ನಡ ಚಂಪುವನ್ನಾಗಿ ಅನುವಾದ ಮಾಡಿದ್ದಾನೆ. ಅಲ್ಲಿ ಕೃತಿಪತಿ ನರೇಂದ್ರ ಚಂದ್ರ ಎಂದಿರುವುದನ್ನು ನೋಡಿದರೆ ನಾಗವರ್ಮನ ಆಶ್ರಯದಾತನ ಹೆಸರೇ ನಾಯಕನದೂ ಆಗಿರಬೇಕೆಂಬ ಊಹೆಗೆ ಅವಕಾಶವಾಗುತ್ತದೆ. ಇದರಿಂದ ಚಂದ್ರಾಪೀಡನ ಪಾತ್ರದ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ